ತೇರಲೈಟ್	-
 	ಪೂರ್ಣ ಸ್ಫಟಿಕಾಕೃತಿಯ ಅಂತಾರಚನೆಯುಳ್ಳ ಅಂತರ್ಗತ ಅಗ್ನಿಶಿಲೆ. ನೆಫಿಲೀನ್ ಕ್ಷಾರಪ್ಲೇಜಿಯೋ ಕ್ಲೇಸ್ ಖನಿಜ ವರ್ಗದ ಲ್ಯಾಬ್ರೊಡರೈಟ್ ಹಾಗೂ ಟೈಟಾನಿಫೆರಸ್ ಅಗೈಟ್ ಈ ಶಿಲೆಯ ಮುಖ್ಯ ಖನಿಜಗಳು. ಗ್ರೀಕ್ ಭಾಷೆಯಲ್ಲಿ ತೇರಾನ್ ಎಂದರೆ ಬೆನ್ನಟ್ಟು ಅಥವಾ ಹಿಂಬಾಲಿಸು ಎಂದು ಅರ್ಥ ಉಂಟು. ಈ ಶಿಲೆಯ  ಅನ್ವೇಷಣೆಯೊಂದಿಗೆ ನೆಫಿಲೀನ್  ಖನಿಜಯುತ   ಕ್ಷಾರ ಶಿಲಾಶ್ರೇಣಿ ಸಂಪೂರ್ಣಗೊಳ್ಳುವುದೆಂಬ ಅಂಶದ  ಮೇಲೆ ಈ ಹೆಸರನ್ನು  ಕೊಡಲಾಗಿದೆ. ಶಿಲಾಶಾಸ್ತ್ರದಲ್ಲಿ ತೇರಲೈಟನ್ನು ನೆಫಿಲೀನ್-ಟೆಫ್ರೈಟ್ ಗುಂಪಿನಲ್ಲಿ ಸೇರಿಸಲಾಗಿದೆ. ತೇರಲೈಟಿನಲ್ಲಿ ಆಂಶಿಕವಾಗಿ ಆಲಿವಿನ್, ಅಲ್ಕಲಿ ಆ್ಯಂಫಿಬೋಲ್, ಬಯೊಟೈಟ್(ಕಪ್ಪು ಅಭ್ರಕ) ಮತ್ತು ಆರ್ಥೋಕ್ಲೇಸ್ ಫೆಲ್ಡ್‍ಸ್ಟಾರ್ ಖನಿಜಗಳು ಇವೆ. ನೆಫಿಲೀನ್, ಆರ್ಥೋಕ್ಲೇಸ್ ಖನಿಜಗಳನ್ನುಳಿದು ಇತರ ಎಲ್ಲ ಖನಿಜಗಳೂ ಪೂರ್ಣ ಆಕೃತಿಯಲ್ಲಿ ಕಂಡು ಬರುತ್ತವೆ.      

	ತೇರಲೈಟ್ ಬಲು ವಿರಳವಾದ ಶಿಲೆ. ಬೊಹೆಮಿಯಾದಲ್ಲಿ ಶಾಂಕಿನೈಟ್ ಶಿಲೆಗಳೊಂದಿಗೆ ದೊರೆಯುವುದು. ಜರ್ಮನಿಯ ವೋಡೆನ್ ವಾಲ್ಡ್‍ನಲ್ಲಿ (ಮೌಂಟ್ ಕಕಟ್ಸೆನ್ ಬಕೆಲ್) ಕೂಡ ಸಿಕ್ಕುವುದು. ಪುಲ್ಕಾಸೈಟ್ (ಆಲ್ಕಲೀಸಯೆನೈಟ್‍ನಲ್ಲಿ ಸಿಲಿಕಾ ಕ್ಷೀಣತೆಯಿಂದ ಉಂಟಾಗುವ ಶಿಲೆ) ಹಾಗೂ ಫೆಯಲೈಟ್‍ಗಳೊಂದಿಗೆ (ಆಲಿವಿನ್ ಖನಿಜ) ಸೆರ್ರಾಡಿ ಮಾನ್‍ಟಕ್ಯೂ, ಪೊರ್ಟ್‍ಗಳಲ್ಲೂ ಸೋವಿಯೆತ್ ರಷ್ಯದ ಕೋಲಾ ಪೆನಿನ್‍ಸುಲಾದಲ್ಲೂ ಸ್ಕಾಟ್‍ಲೆಂಡಿನ ಐಯರ್ ಶೈರಿನ ಕಾರ್ಬಾನಿಫೆರಸ್ ಆಂತಸ್ಸರಣಗಳಲ್ಲೂ ಕಂಡುಬರುತ್ತದೆ. ತೇರಲೈಟಿಗೆ ಸಂಬಂಧಿಸಿದ ಮುಖ್ಯ ಶಿಲೆ ಟೆಶೆನೈಟ್ (ಟೆಶೆನ್: ಚೆಕೋಸ್ಲೊವಾಕಿಯ). ಇದು ನೆಫಿಲೀನ್ ಖನಿಜದ ಬದಲಾಗಿ ಅನಾಲ್ಸಿನ್ (ಓಚಿಂISi2ಔ6.ಊ2ಔ) ಖನಿಜವನ್ನು ಒಳಗೊಂಡಿರುತ್ತದೆ.  ಕೆಲವು ಟೆಶೆನೈಟ್ ಶಿಲೆಗಳಲ್ಲಿ ಈ ಎರಡು ಖನಿಜಗಳೂ ಕಂಡುಬರುವ ಸಾಧ್ಯತೆ ಇದೆ.     

	ತೇರಲೈಟಿನ ರಾಸಾಯನಿಕ ಸಂಯೋಜನೆ (ಶೇಕಡವಾರು) ಹೀಗಿದೆ : 

           SiO2  45,   AI2O3   16.6,   Fe2O3   4.8,   FeO  7,   MgO   5.1,  CaO   9.3,  Na2O  5.3,   K2O   2.5,    H2O  1.9,   TiO3   1.7,   MnO  0.1,   P2O5  0.6,, ಇದರ ಸಾಪೇಕ್ಷ ಸಾಂದ್ರಂತೆ 2.98. (ಟಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ